ಅರಬ್ಬೀ ವಿಮರ್ಶೆ

ಕ್ರಿ.ಪೂ. 10ನೆಯ ಶತಮಾನಕ್ಕಿಂತ ಮುಂಚೆ ಅರಬ್ಬೀ ಸಾಹಿತ್ಯದಲ್ಲಿ ಗುರುತಿಸಿ ಹೆಸರು ಹೇಳುವಂಥ ವಿಮರ್ಶನ ಗ್ರಂಥಗಳು ತೀರಾ ವಿರಳವೆಂದೇ ಹೇಳಬಹುದು. ಸ್ವಂತಿಕೆಯುಳ್ಳ ವಿಮರ್ಶೇಯ ಸಂಪ್ರದಾಯವನ್ನು  ಕಾಣುವುದು ಇನ್ನೂ ಕಷ್ಟ. ಮುಸ್ಲಿಮ್ ಪವಿತ್ರಗ್ರಂಥ ನಿರ್ದೇಶಿಸಿದ ಕಟ್ಟು ಪಾಡುಗಳು, ರೂಪಿಸಿದ ಸಂಪ್ರದಾಯಶೀಲತೆ, ಮತಶ್ರದ್ಧೆ, ಅಷ್ಟಾಗಿ ಸಾಹಿತ್ಯ ವಿಮರ್ಶೆಯ ಬೆಳೆವಣಿಗೆಗೆ ನೆರವು ನೀಡಿದಂತೆ ಕಾಣುವುದಿಲ್ಲ. ಪರ್ಷಿಯನ್, ಗ್ರೀಕ್ ಸಂಸ್ಕøತಿಗಳ ಸಂಪರ್ಕದಿಂದ ಸ್ಫೂರ್ತಿ, ಪ್ರಭಾವಗಳನ್ನು ಪಡೆದಾಗ ಅರಬ್ಬೀ ಸಾಹಿತ್ಯ ತನ್ನ ಸಾಮಥ್ರ್ಯದ ಸಾಧ್ಯತೆಗಳನ್ನು ಗುರುತಿಸಿಕೊಂಡಿರಬೇಕೆನ್ನುವ ಮಾತು ಆ ಭಾಷೆಯ ಸಾಹಿತ್ಯ ವಿಮರ್ಶೆಗೂ ಅನ್ವಯಿಸುತ್ತದೆ.

ಕ್ರಿ.ಪೂ. 10ನೆಯ ಶತಮಾನಕ್ಕಿಂತ ಪೂರ್ವದಲ್ಲಿ ಕುರಾನಿನಲ್ಲಿನ ಭಾಷಾಸೌಂದರ್ಯವನ್ನು ಕುರಿತ ವಿಶ್ಲೇಷಣೆ ಹಲವು ಗ್ರಂಥಗಳಲ್ಲಿ ಕಂಡು ಬರುತ್ತದೆ. ಧರ್ಮಗ್ರಂಥವನ್ನು ವಿವರಿಸುವ ಲೇಖನಗಳೇ ಅರಬ್ಬೀ ಸಾಹಿತ್ಯ ಹಾಗೂ ಶೈಕ್ಷಣಿಕ ಸಂಪ್ರದಾಯದ ರೀತಿನೀತಿಗಳನ್ನು ರೂಪಿಸಿತು. ಬಾಗದಾದಿನ ಅಬ್ಬಾಸಿದ್ ಮನೆತನದ ಆಳ್ವಿಕೆಯ ಕಾಲದ ಸಾಹಿತ್ಯದಲ್ಲಿ ಮಾನವೀಯತೆ ಹಾಗೂ ವಿಚಾರಪ್ರವೃತ್ತಿಯ ಅಂಶಗಳು ವ್ಯಕ್ತವಾದುವು. ಆ ಯುಗದ ಚಿಂತನಶಕ್ತಿ ಅರಬ್ಬೀ ಸಾಹಿತ್ಯ ಸಂಪ್ರದಾಯಕ್ಕೆ ಹೊಸ ದಾರಿ ಸೂಚಿಸಿತು.  ಆಲ್ ಅಮೀದಿ (10ನೆಯ ಶತಮಾನ) ಬರೆದ ಭಾಷಾ ಶಾಸ್ತ್ರ ಗ್ರಂಥ ಹಾಗೂ ಪತ್ರಗಳಲ್ಲಿ ಕಾಣಸಿಗುವ ಅಬು ತಮಾಮ್ ಮತ್ತು ಆಲ್ ಬುಹ್ತುರಿ ಎಂಬ ಕವಿಗಳನ್ನು ಕುರಿತ ತೌಲನಿಕ ವಿವರಣೆ ಆ ಕಾಲದ ವಿಮರ್ಶನ ಸಾಹಿತ್ಯದ ರೂಪುರೇಷೆಗಳನ್ನು ಚಿತ್ರಿಸುತ್ತದೆ. ಗ್ರೀಕ್ ಅಲಂಕಾರ ಶಾಸ್ತ್ರದ (ರ್ಹೆಟೊರಿಕ್) ಸೂತ್ರಗಳನ್ನು ಅರಬ್ಬೀ ಸಾಹಿತ್ಯಕ್ಕೆ ಅನ್ವಯಿಸುವಂತೆ ಪ್ರಯೋಗಿಸುವ ಸೂಚನೆ ಖುದಾಮಾ - ಇಬ್ನ್ - ಜಾಫರ್‍ನ (10ನೆಯ ಶತಮಾನ) ಗ್ರಂಥದಲ್ಲಿದೆ. ಒಂದೇ ದಿನ  ಕಲೀಫನಾಗಿದ್ದು ಕೊಲೆಗೀಡಾದ ದುರ್ದೈವಿ, ಅಬ್ಬಾಸಿದ್ ಮನೆತನದ ರಾಜಕುಮಾರ ಇಬ್ನ್ ಆಲ್ ಮುತಾಜ್ ಬರೆದ ಕಿತಾಬ್ ಆಲ್ ಬಾದಿ ಅರಬ್ಬೀ ಬಾಷೆಯಲ್ಲಿನ ಪ್ರಯತೆಯನ್ನು ಪ್ರದರ್ಶಿಸುವ ಸ್ವಾರಸ್ಯವಾದ ಶಾಸ್ತ್ರಗ್ರಂಥ. ಅತು - ಹಿಲಾಲ್ - ಆಲ್ - ಅಸ್ಕಾರಿಯ ಗ್ರಂಥ ಕಿತಾಬ್-ಆಲ್-ಸಿನಾ ಆ ತಯನ್‍ನಲ್ಲಿ ಗದ್ಯ ಪದ್ಯ ರಚನೆಯನ್ನು ಕುರಿತ ಸೂತ್ರಗಳ ವಿವೇಚನೆ ಇದೆ. ಕುರಾನಿನ ಅದ್ಭುತ ಗದ್ಯ ಶೈಲಿಯನ್ನು ಕುರಿತು ಆತ ನೀಡಿದ ವಿವರಣೆ ಅನಂತರದ ಹಲವು ಲೇಖಕರನ್ನು ಆಕರ್ಷಿಸಿತು. ಆಲ್ ಬಾಖಿರಲಾನಿ ಧರ್ಮಗ್ರಂಥದ ಶೈಲಿಯನ್ನು ಕುರಿತು ಬರೆದ ಲೇಖನವೇ ಅರಬ್ಬೀ ಸೌಂದರ್ಯ ಶಾಸ್ತ್ರದ ಆಕರಗ್ರಂಥವೆನ್ನುತ್ತಾರೆ. ಹತ್ತು ಹನ್ನೊಂದನೆಯ ಶತಮಾನದ ಸುಪ್ರಸಿದ್ಧ ಅರಬ್ಬೀ ಸಾಹಿತಿಗಳಲ್ಲಿ ಪ್ರಮುಖರಾದ ಆಲಲ್-ಮುತಾನ್ ಅಬ್ಬಿ ಮತ್ತು ಅಬುಲ್-ಆಲಾ ಆಲ್-ಮರ್ರಿ ಕಾವ್ಯ ಸಂಪ್ರದಾಯಕ್ಕೆ ದಾರಿ ಮಾಡಿಕೊಟ್ಟರು.
ಕ್ರಿ.ಪೂ. 1080ರಲ್ಲಿ ಕಾಲವಾದ ಅಬು-ಮನ್‍ಸುರ್-ಥಾ ಅಲಿಬಿ ತನ್ನ ಸಮಕಾಲೀನ ಕವಿಗಳ ಕೃತಿಗಳನ್ನೊಳಗೊಂಡ ಒಂದು ಕಾವ್ಯ ಸಂಕಲನವನ್ನು (ಯತಿ ಮತ್‍ಅಲ್ ದಹ್ರ್) ಸಿದ್ಧಪಡಿಸಿದ, ಅದು ಅಂದಿನ ಅಭಿರುಚಿ, ವೈದುಷ್ಯಗಳ ಪ್ರತಿಬಿಂಬವೆನ್ನುತ್ತಾರೆ. ಇಬ್ನ ರಷೀಖ್‍ನ ಅಲ್‍ಉಮ್‍ದಾದಲ್ಲಿ ಹಳತು ಹೊಸತುಗಳ ಘರ್ಷಣೆ  ಹಾಗೂ ಹೊಸಕಾಲದ ಕವಿಗಳನ್ನು ಕುರಿತು ಹೇಳುವ ಮಾತುಗಳು ಗಮನಾರ್ಹವಾಗಿವೆ; ಹಳೆಯ ಕವಿಗಳಿಗಿಂತ ಹೊಸ ಕವಿಗಳು ಹೆಚ್ಚು ಸ್ವಾತಂತ್ರ್ಯ ಪ್ರವೃತ್ತಿಯುಳ್ಳವರು. ಬೇರುಸತ್ತ ಹಳೆಯ ಸಂಪ್ರದಾಯವನ್ನು ಅವರು ಪೂರ್ಣವಾಗಿ ತ್ಯಜಿಸಿದರೆ ಹೆಚ್ಚಿನ ಮನ್ನಣೆಗಳಿಸಬಹುದು. ಕವಿಗಳು ವಾಸ್ತವಿಕತೆ ಹಗೂ ಪ್ರಕೃತಿಯಿಂದ ಸ್ಫೂರ್ತಿ ಪಡೆಯಬೇಕು. ಹಳೆಯ ರಚನಾತಂತ್ರ, ಪ್ರಕಾರಗಳನ್ನು ಕುರುಡು ಕುರುಡಾಗಿ ಅನುಕರಿಸುವುದು  ನಿರಾಕರಿಸಬೇಕು . . . . ಇತ್ಯಾದಿ. ಈ ಮಾತುಗಳು ಸಾರ್ವತ್ರಿಕವಾದ ಕೆಲವು ವಿಮರ್ಶನ ಮೌಲ್ಯಗಳನ್ನು ಅಭಿವ್ಯಕ್ತಗೊಳಿಸುತ್ತವೆ; ಅರಬ್ಬೀ ವಿಮರ್ಶೇಯ ಸ್ವರೂಪದ ಒಂದು ಮುಖವನ್ನು ಚಿತ್ರಿಸುತ್ತವೆ.
ಪ್ರಕೃತಿ ವಿಜ್ಞಾನವನ್ನು ಅಭ್ಯಸಿಸಿ ಆಳವಾದ ಅರಿವನ್ನು ಪಡೆದಿದ್ದ ಹಲವರು ಹೊಸ ಸಾಹಿತ್ಯ ಸೂತ್ರಗಳನ್ನು ಕುರಿತ ತಮ್ಮ ಕಳಕಳಿಯನ್ನು ಪ್ರದರ್ಶಿಸಿದರು.

16ನೆಯ ಶತಮಾನದ ಅನಂತರ ಖಿಲವಾಗುತ್ತ ಬಂದ ಅರಬ್ಬೀ ಪ್ರಭಾವ ಅವರ ಸಾಹಿತ್ಯದ ಇತಿಹಾಸವನ್ನು ಮಸುಕುಗೊಳಿಸಿತು. ಹೊಸ ಹುಟ್ಟಿನ (ರೆನೆಸಾನ್ಸ್) ಕಾಲದಲ್ಲಿ ಯೂರೋಪಿನ ಮೂಲೆ ಮೂಲೆಯಲ್ಲಿ ಹೊಸ ಚೈತನ್ಯ, ಉತ್ಸಾಹ ತುಂಬಿ ತುಳುಕಿ ಅಲ್ಲಿನ ವಿವಿಧ ದೇಶೀಯ ಸಾಹಿತ್ಯಗಳಲ್ಲಿ ಹೊಸ ತಳಿರು ಚಿಗುರುತ್ತಿದ್ದಾಗ ಅರಬ್ಬರ ಪ್ರಭಾವ ಕ್ಷೀಣವಾಗಲು ಐತಿಹಾಸಿಕ ಘಟನೆಗಳೂ ಸ್ವಲ್ಪಮಟ್ಟಿಗೆ ಕಾರಣ. ವ್ಯಾಪಾರಕ್ಕಾಗಿ ಹೊಸ ಕಡಲುಮಾರ್ಗಗಳನ್ನು ಕಂಡುಹಿಡಿದಾಗ ಮೆಡಿಟೇರಿಯನ್ ಸುತ್ತಲಿನ ಅರಬ್ಬೀ ಪ್ರದೇಶಗಳು ಹಿಂದುಳಿದವು. ಆದರೂ ಅರಬ್ಬೀ ಸಾಹಿತಿಗಳು ಮಂದಗಾಮಿಗಳಾದರೂ ಸತ್ತ್ವರಹಿತವಾಗಿರಲಿಲ್ಲ. ಇದಕ್ಕೆ ಆ ಕಾಲದ ಸ್ಪೇನಿನ ಮುಸಲ್ಮಾನ ಲೇಖಕರ ಉಜ್ವಲ ಇತಿಹಾಸವೇ ಸಾಕ್ಷಿ. ಆದರೆ ವಿಮರ್ಶೇಯ ದೃಷ್ಟಿಯಿಂದ ಗಮನಾರ್ಹ ಅಂಶವೆಂದರೆ ಆ ಕಾಲದಲ್ಲಿ ರಚಿತವಾದ ವೈಜ್ಞಾನಿಕ ಗ್ರಂಥ; ಗ್ರಂಥದಲ್ಲಿ ಸೇರಿಸಲಾದ ಅರಬ್ಬೀ ಗ್ರಂಥಗಳ ಪ್ರಮಾಣ ಗ್ರಂಥಸೂಚಿ (ಬಿಬ್ಲಿಯೊಗ್ರಫಿ).

ಅಹ್ಮದ್ ಇಬ್ನ್-ಮುಹಮ್ಮದ್ ಆಲ್-ಮಖಾರಿ ಆ ಕಾಲದಲ್ಲಿ ಇಂಥ ಒಂದು ಗ್ರಂಥವನ್ನು ರಚಿಸಿದ, ಇದಕ್ಕೆ ಮುಂಚೆ, ಹದಿನಾಲ್ಕನೆಯ ಶತಮಾನದಲ್ಲಿ ಅರಬ್ಬರು ಪ್ರಪಂಚದ ಹಲವು ಕಡೆಗಳಲ್ಲಿ ಇಸ್ಲಾಂ ಧರ್ಮವನ್ನು ಹರಡಿ ವ್ಯಾಪಕವಾದ ಪ್ರಭಾವ ಬೀರಿದ್ದರು.

ಹದಿನೈದನೆಯ ಶತಮಾನದಲ್ಲಿ ಅರೇಬಿಯದ ಆಟೋಮನ್ ಸಾಮ್ರಾಜ್ಯ ಸ್ಥಾಪನೆಯಾದ ಅನಂತರ ಹಜಿ ಕಲ್ಫ ಮುಂತಾದವರು ಅರಬ್ಬೀ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸಿ, ಭಾಷೆಯ ಸೌಂದರ್ಯವನ್ನು ಹೆಚ್ಚು ನಿಚ್ಚಳವಾಗಿ ಪ್ರಕಟಪಡಿಸಿದರು.
ಹದಿನೆಂಟನೆಯ ಶತಮಾನದಲ್ಲಿ ವಾಹಬಿ ಧರ್ಮಸುಧಾರಣೆ ನಡೆಯುತ್ತಿದ್ದು ಎಲ್ಲೆಡೆ ರಕ್ತಪಾತವಾಗುತ್ತಿದ್ದಾಗ ದಕ್ಷಿಣ ಅರೇಬಿಯದಲ್ಲಿನ ಆಲ್-ಸೈಯೀದ್ ಆಲ್ ಮುಂತಾದ ತನ್ನ ಆಲ್-ಯಮನ್ ವಿದ್ಯಾಲಯದಲ್ಲಿ ಜ್ಞಾನದ ನಂದಾದೀವಿಗೆಯನ್ನು ಬೆಳಗಿದ. ಅತ ಬÀರೆದ ಸಂಪಾದಕೀಯ ಟಿಪ್ಪಣಿಗಳು ಹೊಸ ಅಭಿರುಚಿ, ಆಸಕ್ತಿಗಳನ್ನು ಸೂಚಿಸುತ್ತವೆ. ಆಲ್ ಫಜಾಲಿಯನ್ನು ಕುರಿತ ವಿಮರ್ಶೆಯಲ್ಲಿ ಹಳೆಯ ಸಂಪ್ರದಾಯದ ಟೀಕೆಯಿದೆ.

ಹದಿನೆಂಟನೆಯ ಶತಮಾನದಲ್ಲಿ ಕಲೀಫರುಗಳನ್ನು ಕುರಿತ ಕೇವಲ ಪ್ರಶಸ್ತಿಕಾವ್ಯಗಳನ್ನು ಬರೆದು ಕವಿಗಳು ಕೃತಕೃತ್ಯತೆಯನ್ನು ಪಡೆದುಕೊಂಡರು. 19ನೆಯ ಹಾಗೂ 20ನೆಯ ಶತಮಾನದ ಅರಬ್ಬೀ ಸಾಹಿತಿಗಳು ಯೂರೋಪಿನ ಸಾಹಿತ್ಯಸೂತ್ರಗಳಿಂದ ಹಲವು ತೆರನಾದ ಪ್ರಭಾವ ಪಡೆದಿದ್ದಾರೆ ಎಂಬುದು ವಿದ್ವಾಂಸರ ಮತ. ಅಬ್ಬಾಸಿದ್ ಸ್ವರ್ಣಯುಗ ಹಾಗೂ ಆಂಡಲ್ಯೂಷಿಯನ್ ಕಾಲದ ಸಾಹಿತ್ಯ, ದರ್ಶನ, ಸೂತ್ರಗಳನ್ನು ಪುನರುಜ್ಜೀವನಗೊಳಿಸುವು ಆಕಾಂಕ್ಷೆ ಆ ಯುಗದ ಕೃತಿಗಳಲ್ಲಿ ವ್ಯಕ್ತವಾಗುತ್ತದೆ. ಅಲ್‍ಮರಾಹಿಲ್‍ನಂಥ ಈ ಕಾಲದ ಹಲವು ಸಾಹಿತ್ಯಚರಿತ್ರೆಗಳಲ್ಲಿ ಹೊಸ ಸೂತ್ರಗಳ ಪ್ರಸ್ತಾಪವಿದೆ.

(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ